-->
Bookmark

Gajendragad : ʼಅಕ್ಷರ ಜ್ಯೋತಿ ಬೆಳಗಿದ ಅನ್ನದಾನ ಶ್ರೀಗಳುʼ

Gajendragad : ʼಅಕ್ಷರ ಜ್ಯೋತಿ ಬೆಳಗಿದ ಅನ್ನದಾನ ಶ್ರೀಗಳುʼ
ಹಾಲಕೆರೆ ಅಕ್ಷರ ಜಾತ್ರೆಯ ಅಂಗವಾಗಿ ನಡೆದ ಜಾಗೃತಿ ಜಾಥಾ
ಗಜೇಂದ್ರಗಡ : (Dec_22_2023)
ಗಜೇಂದ್ರಗಡ: ಸಮಾಜದಲ್ಲಿ ತಾಂಡವಾಡುತ್ತಿರುವ ಅನಕ್ಷರತೆಯನ್ನು ಹೋಗಲಾಡಿಸಬೇಕು ಎನ್ನುವ ಸದುದ್ದೇಶದೊಂದಿಗೆ  ಪ್ರತಿಯೊಂದು ಮನೆಯಲ್ಲಿಯೂ  ಅಕ್ಷರ ಜ್ಯೋತಿ ಬೆಳಗಿದ ಕೀರ್ತಿ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನನ ಮಠದ ಪೂಜ್ಯರಿಗೆ ಸಲ್ಲುತ್ತದೆ ಎಂದು ನರೇಗಲ್‌ ಕಿವುಡ ಮಕ್ಕಳ ಶಾಲೆಯ ಚೇರಮನ್ನರಾದ ಶರಣಪ್ಪ ಕೆ. ರೇವಡಿ ಹೇಳಿದರು.
ಗಜೇಂದ್ರಗಡ ತಾಲ್ಲೂಕಿನ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಮಠದ ವತಿಯಿಂದ ಜನವರಿ 13, 14 ರಂದು ನಡೆಯುವ  ʼಅನ್ನದಾನಿ ಅಕ್ಷರ ಜಾತ್ರೆʼ ಕಾರ್ಯಕ್ರಮದ ಅಂಗವಾಗಿ ನಗರದ ಅನ್ನದಾನೇಶ್ವರ ಪಿಯು ಕಾಲೇಜಿನ ವತಿಯಿಂದ ಗುರುವಾರ ನಡೆದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯ ಅನ್ನದಾನ ಶ್ರೀಗಳು ನರೇಗಲ್‌ ಪಟ್ಟಣದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಜೋಳಗಿ ಹಾಕಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ಕಾರಣ ಉತ್ತರ ಕರ್ನಾಟಕದಾದ್ಯಂತ ಅಕ್ಷರ ಪಡೆದ ಶಿಕ್ಷಿತರು ಹುಟ್ಟಿಕೊಂಡರು. ಶ್ರೀಗಳ ಮಾರ್ಗದರ್ಶನದಂತೆ ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಪಾಠಪ್ರವಚನದ ಜೊತೆಯಲ್ಲಿ ಸಂಸ್ಕಾರ, ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ. ಆದ ಕಾರಣ ಅಕ್ಷರ ಜ್ಯೋತಿಯ ಜೊತೆಯಲ್ಲಿ ಜ್ಞಾನದ ಜ್ಯೋತಿ ವಿದ್ಯಾರ್ಥಿಗಳ ರೂಪದಲ್ಲಿ ಬೆಳಕು ಚೆಲ್ಲಿದೆ. ಹಾಗಾಗಿ ಈಗಿನ ಮುಪ್ಪಿನಬಸವಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಆಯೋಜನೆ ಮಾಡುತ್ತಿರುವ ಅನ್ನದಾನಿ ಅಕ್ಷರ ಜಾತ್ರಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಪ್ರಾಥಮಿಕ ಶಾಲೆಯ ಚೇರಮನ್ನ ಪ್ರಭು ಎನ್.‌ ಚವಡಿ ಮಾತನಾಡಿ, ರಾಜ್ಯದಲ್ಲೇ ವಿಶೇಷಾಗಿರುವ ಮಹಿಳೆಯರಿಂದ ಮಾತ್ರ ಎಳೆಯಲ್ಪಡುವ ಬೆಳ್ಳಿ ರಥೋತ್ಸವ, 5001 ಮುತ್ತೈದೆಯವರ ಉಡಿ ತುಂಬುವ ಕಾರ್ಯಕ್ರಮ, 261 ಚಕ್ಕಡಿಗಳ ಮೂಲಕ ಪುಣ್ಯಕ್ಷೇತ್ರ ಉಳವಿಯವರೆಗೆ ಪ್ರಯಾಣ, 5001 ಕೃಷಿ ಕಾರ್ಮಿಕ ತಾಯಂದಿರ ಸನ್ಮಾನ, ಜೈವಿಕ ಇಂಧನದ ತಿಳುವಳಿಕೆಗಾಗಿ ತಜ್ಞರ ಸಮಾವೇಶ, ಸಾವಯವ ಕೃಷಿಕರ ಸಮಾವೇಶ, ರಕ್ತದ ತುಲಾಭಾರ, ಬೃಹತ್ ವನಮಹೋತ್ಸವ, ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಹೀಗೆ ಹತ್ತು ಹಲವಾರು ವಿನೂತನ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳು  ಶ್ರೀಮಠದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು. ಅವರೇ ಸ್ಥಾಪನೆ ಮಾಡಿದ ಗಜೇಂದ್ರಗಡದ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯು  ಇಲ್ಲಿನ ಅನೇಕ ಮಕ್ಕಳ ಬಾಳು ಬೆಳಗಿದೆ ಎಂದರು.
ಪಿಯು ಪ್ರಾಚಾರ್ಯ ವಸಂತರಾವ್‌ ಗಾರಗಿ ಮಾತನಾಡಿ, ಲಿಂಗೈಕ್ಯ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳು  ಅಧ್ಯಾತ್ಮ ಮತ್ತು ಧಾರ್ಮಿಕ ಭಾವನೆ ಜೊತೆಯಲ್ಲಿ ಗುಣಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ಈಗಿನ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಸಹ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪ್ರಥಮ ಆದ್ಯತೆ ನೀಡುತ್ತಾರೆ. ಅದರಂತೆ ಪ್ರತಿವರ್ಷವೂ ಉತ್ತಮ ಫಲಿತಾಂಶ ದಾಖಲಾಗುತ್ತಿದೆ ಎಂದರು. ಹಾಲಕೆರೆ ಗ್ರಾಮದಲ್ಲಿ ನಡೆಯುವ ಅನ್ನದಾನಿ ಅಕ್ಷರ ಜಾತ್ರಗೆ ನಾವೆಲ್ಲರೂ ತನು, ಮನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಠದ ಶ್ರೀಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಧ್ಯಾಹ್ನ ಆರಂಭವಾದ ಜಾಗೃತಿ ಜಾಥಾದಲ್ಲಿ ಗಜೇಂದ್ರಗಡ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು. ಪುರ್ತಗೇರಿ ಕ್ರಾಸ್‌ ಬಳಿಯ ಕಾಲೇಜಿನ ಆವರಣದಿಂದ ಆರಂಭವಾದ ಜಾಥಾ ಕೆ. ಕೆ. ವೃತ್ತದವರೆಗೆ ನಡೆಯಿತು. ವಿದ್ಯಾರ್ಥಿಗಳ ಕೈಯಲ್ಲಿ ಅನ್ನದಾನಿ ಅಕ್ಷರ ಜಾತ್ರೆಗೆ ಬನ್ನಿ ಎಂಬ ಫಲಕಗಳು ರಾರಾಜಿಸಿದವು. ಕೆ. ಕೆ. ವೃತ್ತದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಾಗೃತಿ ಮೂಡಿಸಲಾಯಿತು. ನಂತರ ಶ್ರೀ ಅನ್ನದಾನೇಶ್ವರ ಮಹಾರಾಜ್‌ ಕೀ ಜೈ, ಡಾ. ಅಭಿನವ ಅನ್ನದಾನ ಮಹಾರಾಜ್‌ ಕೀ ಜೈ, ಶ್ರೀ ಮುಪ್ಪಿನ ಬಸವಲಿಂಗ ಮಹಾರಾಜ್‌ ಕೀ ಜೈ, ಹರಹರ ಮಹಾದೇವ ಎಂಬ ಘೋಷಣೆಗಳು ಮುಳಗಿದವು.
ಈ ವೇಳೆ ಆಡಳಿತ ಮಂಡಳಿ ಸದಸ್ಯರಾದ ಎಂ. ಪಿ. ಪಾಟೀಲ, ಐಟಿಐ ಚೇರಮನ್ನ ಎಸ್.‌ ಸಿ. ಚಕ್ಕಡಿಮಠ, ಐಟಿಐ ಪ್ರಾಚಾರ್ಯ ಎ. ಪಿ. ಗಾಣಗೇರ, ಪದವಿ ಪ್ರಾಚಾರ್ಯ ಬಸಯ್ಯ ಹಿರೇಮಠ, ಪ್ರಾಥಮಿಕ ಶಾಲೆಯ ಮುಖ್ಯಸ್ಥ ಮಂಜುನಾಥ ಕಾಡದ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.
Post a Comment

Post a Comment