-->
Bookmark

Gajendragad : ಕ್ರೀಡಾಕೂಟ ಯಶಸ್ವಿಗೊಳಿಸಿದ ಪ್ರಶಿಕ್ಷಣಾರ್ಥಿಗಳು

Gajendragad : ಕ್ರೀಡಾಕೂಟ ಯಶಸ್ವಿಗೊಳಿಸಿದ ಪ್ರಶಿಕ್ಷಣಾರ್ಥಿಗಳು 
ಕ್ರೀಡೆಯಲ್ಲಿ ನಿರ್ಣಾಯಕರ ಪಾತ್ರ ಅತ್ಯಂತ ಮಹತ್ವ

ಗಜೇಂದ್ರಗಡ: (Aug_06_2024)
ಪಿಯು ಕಾಲೇಜುಗಳ ಗಜೇಂದಗ್ರಡ ತಾಲ್ಲೂಕು ಮಟ್ಟದ ಎಲ್ಲಾ ಕ್ರೀಡೆಗಳು ಯಾವುದೇ ರೀತಿಯ ಜಗಳ, ಗೊಂದಲ ಹಾಗೂ ರಗಳೆ ಇಲ್ಲದೆ ಯಶಸ್ವಿಯಾಗಿ ನಡೆಯಲು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ ಎಲ್ಲರ ಕೊಡುಗೆ ಅಪಾರವಾಗಿದೆ ಎಂದು ಪಿಯು ಪ್ರಾಚಾರ್ಯ ವಸಂತರಾವ್‌ ಗಾರಗಿ ಹೇಳಿದರು.
ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್‌ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರ ಕಾರ್ಯಾಲಯ ಗದಗ ಇವರ ಆಶ್ರಯದಲ್ಲಿ ಈಚೆಗೆ  ನಡೆದ 2024-25ನೇ ಸಾಲಿನ ಗಜೇಂದ್ರಗಡ ತಾಲ್ಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದಲ್ಲಿ ನಿರ್ಣಾಯಕರಾಗಿ ಸೇವೆ ಸಲ್ಲಿಸಿದವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ವಿವಿಧ ವಿದ್ಯಾಸಂಸ್ಥೆಯಲ್ಲಿ ದೈಹಿಕ ಶಿಕ್ಷಣದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರು ಅವರಿಗೆ ನೀಡಿದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಆದರೆ ರೋಣ ನಗರದ ರಾಜೀವ್‌ ಗಾಂಧಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಕ್ರೀಡಾಧಿಕಾರಿಗಳಾಗಿ ನಿಭಾಯಿಸಿದ ಸೇವೆ ಶ್ಲಾಘನೀಯವಾಗಿದೆ. 15ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಊಟವನ್ನು ಲೆಕ್ಕಿಸದೇ ನಿರಂತರವಾಗಿ ಎರಡು ದಿನ ಆಟವಾಡಿಸಿದ್ದಾರೆ. ಯಾವುದೇ ವಿದ್ಯಾರ್ಥಿಯ, ಕಾಲೇಜಿನ ತಂಡದ ಪ್ರತಿಭೆಗೆ, ಆಟಕ್ಕೆ ಮೋಸವಾಗದಂತೆ ನಿರ್ಣಯಗಳನ್ನು ನೀಡಿದ್ದಾರೆ. ಆದಕಾರಣ ಕೇವಲ 2 ದಿನಗಳಲ್ಲಿ ಎಲ್ಲಾ ಸ್ಪರ್ಧೆಗಳು ಮುಕ್ತಾಯಗೊಳ್ಳಲು ಸಾಧ್ಯವಾಯಿತು ಎಂದರು.
ಅಂದಾಜು 4 ಸಾವಿರ ಜನರು ಸೇರಿದ ಸಮೂಹದಲ್ಲಿಯೂ ಆಟದ ನಿಯಮಗಳನ್ನು ಪಾಲನೆ ಮಾಡಿಕೊಂಡು ಯಶಸ್ವಿಗೊಳಿಸುವಲ್ಲಿ ಪ್ರಶಿಕ್ಷಣಾರ್ಥಿಗಳ ಕಾರ್ಯ ಮುಖ್ಯವಾಗಿದೆ. ಇಲ್ಲಿ ಎರಡು ದಿನ ನಿರಂತರವಾಗಿ ಕಾರ್ಯನಿರ್ವಹಿಸಿದ ಕಾರಣ ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ಅನುಭವ ದೊರಕಿದೆ. ಮುಂದಿನ ಭವಿಷ್ಯದಲ್ಲಿ ಸಹಕಾರಿಯಾಗಲಿದೆ ಎಂದರು. ಪ್ರಶಿಕ್ಷಣಾರ್ಥಿಗಳ ಕಾರ್ಯವನ್ನು 14 ಕಾಲೇಜುಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ತರಬೇತುದಾರರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಈ ವೇಳೆ ರೋಣ ರಾಜೀವ್‌ ಗಾಂಧಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಇಸ್ಮಾಯಿಲ್‌ ಕೊಟೇಕಲ್‌, ಮುತ್ತುರಾಜ ಗಾಣಗೇರ, ಮಂಜುನಾಥ ನರೇಗಲ್‌, ಅಲ್ತಾಫ್‌ ಮೀರನಾಯಕ, ಪ್ರದೀಪ ಮಾದರ, ಭೀಮವ್ವ ಪೂಜಾರ, ಸಂಗಮ್ಮ, ಪರಶುರಾಮ ಜೋಗಿನ್‌, ಶಿವಕುಮಾರ ಗುಡಿಮನಿ, ಸೋಮು ಕಟ್ಟೇಕರ್‌, ಶರಣು ಎಲಿಗಾರ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಅನ್ನದಾನೇಶ್ವರ ಕಾಲೇಜಿನ ಸಿಬ್ಬಂದಿಗಳು ಇದ್ದರು.
Post a Comment

Post a Comment