-->
Bookmark

Gajendragad : ತರಗತಿ ಬಹಿಷ್ಕಾರ ಹಿಂಪಡೆದ ಅರೆಕಾಲಿಕ ಉಪನ್ಯಾಸಕರ ಸಂಘ

Gajendragad : ತರಗತಿ ಬಹಿಷ್ಕಾರ ಹಿಂಪಡೆದ ಅರೆಕಾಲಿಕ ಉಪನ್ಯಾಸಕರ ಸಂಘ

ಗಜೇಂದ್ರಗಡ: (Sept 30_2023) 
ಅಖಿಲ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘವು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ತರಗತಿ ಬಹುಷ್ಕಾರವನ್ನು ಗುರುವಾರದಿಂದ ಹಿಂಪಡೆದಿದೆ.

ಆಯುಕ್ತರಿಗೆ ಮನವಿ ಸಲ್ಲಿಕೆ: 
ರಾಜ್ಯದ 105 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ ವೇತನ ಹೆಚ್ಚಿಸಬೇಕು, ೧೨ ತಿಂಗಳುಗಳ ಕಾಲ ವೇತನ ನೀಡಬೇಕು, ಸೇವಾ ಭದ್ರತೆ ಒದಗಿಸಬೇಕು ಎಂದು ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದ ಉಪಾಧ್ಯಕ್ಷರಾದ ಪ್ರವೀಣಕುಮಾರ ಬೇವಿನಕಟ್ಟಿ ಒತ್ತಾಯಿಸಿದರು.

ಬೆಂಗಳೂರಿನ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಜಗದೀಶ್ ಜಿ. ಅವರಿಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಲಕ್ಷಾಂತರ ಬಡ ಕುಟುಂಬದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಅರೆಕಾಲಿಕ ಉಪನ್ಯಾಸಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ನೀಡುತ್ತಿರುವ ವೇತನದಿಂದ ಕುಟುಂಬ ನಿರ್ವಹಣೆ ಅಸಾಧ್ಯ. ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ಮಾಸಿಕ ವೇತನವನ್ನು 2021ರಲ್ಲಿ ₹11,000ದಿಂದ ₹32,000ವರೆಗೆ ಹೆಚ್ಚಳ ಮಾಡಲಾಗಿದೆ. ರಾಜ್ಯ ಸರ್ಕಾರದ ಅಧೀನದ ವಸತಿ ಶಿಕ್ಷಣ ಸಂಸ್ಥೆ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ ವೇತನವನ್ನು ಇತ್ತೀಚೆಗೆ ಪರಿಷ್ಕರಿಸಿದೆ. ಆದರೆ ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ ವೇತನದಲ್ಲಿ ಯಾವುದೇ ಬದಲಾವಣೆ ಮಾಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ಮಾಸಿಕ ವೇತನದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದರಿಂದ ಅರೆಕಾಲಿಕ ಉಪನ್ಯಾಸಕರು ನೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸೆ.25ರಿಂದ ರಾಜ್ಯಾದ್ಯಂತ ಎಲ್ಲ ಅರೆಕಾಲಿಕ ಉಪನ್ಯಾಸಕರು ಅನಿರ್ದಿಷ್ಟಾವಧಿವರೆಗೆ ಯಾವುದೇ ತರಗತಿ ತೆಗೆದುಕೊಳ್ಳದೇ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆ ಮಾಡಿದಂತೆ ನಮಗೂ ಆರು ದಿನಗಳ ಕೆಲಸ ಕೊಟ್ಟು ಅದಕ್ಕೆ ತಕ್ಕಂತೆ ವೇತನ ಹೆಚ್ಚಿಸಿ 12 ತಿಂಗಳುಗಳ ಕಾಲ ವೇತನ ನೀಡಬೇಕೆಂದು ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಜಗದೀಶ್ ಜಿ., ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆ ಮಾಡಿದಂತೆ ನಿಮಗೂ ವೇತನ ಹೆಚ್ಚಳ ಮಾಡಲಾಗುವುದು. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರು, ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಈ ಕುರಿತು ಸಮಿತಿ ರಚನೆ ಮಾಡಿ ಶೀಘ್ರದಲ್ಲೇ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತೇವೆ. ತರಗತಿಗಳನ್ನು ಬಹಿಷ್ಕರಿಸದೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅರೆಕಾಲಿಕ ಉಪನ್ಯಾಸಕರು ತರಗತಿಗೆ ತೆರಳಬೇಕು ಎಂದು ಸೂಚಿಸಿದರು.
ಆಯುಕ್ತರ ಭರವಸೆ ಮೇರೆಗೆ ನಮ್ಮ ಅನಿರ್ದಿಷ್ಟಾವಧಿ ತರಗತಿ ಬಹಿಷ್ಕಾರವನ್ನು ಹಿಂಪಡೆಯುತ್ತಿದ್ದೇವೆ ಎಂದು ಅರೆಕಾಲಿಕ ಉಪನ್ಯಾಸಕರ ಸಂಘದ ಉಪಾಧ್ಯಕ್ಷರು ತಿಳಿಸಿದ್ದಾರೆ.

ಬಳಿಕ ತಾಂತ್ರಿಕ ಶಿಕ್ಷಣ ಇಲಾಖೆಯ ಆಡಳಿತಾಧಿಕಾರಿ ಕಿರಣಕುಮಾರ  ಅವರಿಗೂ ಮನವಿ ಸಲ್ಲಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಯಶವಂತ ಆರೇರ, ಬೈರೆಡ್ಡಿ, ಶಂಕರ್ ಜಿ., ದಿವ್ಯಾಶ್ರೀ, ಚಂದ್ರಿಕಾ, ಶಿವಪಾಲನೇಶ್ವರಿ, ಅನು ಡಿ., ಸಹನಾ ಕೆ.ವಿ., ವಿನಯ ಎಂ.ಎಸ್. ಇದ್ದರು.
Post a Comment

Post a Comment