-->
Bookmark

Gajendragad : ಹಂದಿದಾಳಿ ಬಾಲಕನಿಗೆ ಗಂಭೀರ ಗಾಯ

Gajendragad : ಹಂದಿದಾಳಿ ಬಾಲಕನಿಗೆ ಗಂಭೀರ ಗಾಯ
ಗಜೇಂದ್ರಗಡ : (Dec_17_2023)
ಪಟ್ಟಣದ ಲಂಬಾಣಿ ತಾಂಡದಲ್ಲಿ ನಾಗಸಿಂಹ ಎನ್ನುವ ಪುಟ್ಟ ಬಾಲಕನ ಮೇಲೆ ಹಂದಿ ದಾಳಿ ನಡೆಸಿದ ಪರಿಣಾಮವಾಗಿ ಬಾಲಕನು ಗಂಭೀರವಾಗಿ ಗಾಯಗೊಂಡಿದ್ದು ಸದ್ಯ ಗಜೇಂದ್ರಗಡ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ+ ಪಡೆಯುತ್ತಿದ್ದಾನೆ.
  ಶನಿವಾರ ಸಂಜೆವೇಳೆ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನು ಕಾಲು ಜಾರಿ ಚರಂಡಿಯಲ್ಲಿ ಬಿದ್ದಿದ್ದಾನೆ. ಆದರೆ ಅದೇ ಚರಂಡಿಯಲ್ಲಿದ್ದ ಹಂದಿಯೊಂದು ಬಾಲಕನ ಮೇಲೆ ದಾಳಿ ನಡೆಸಿದೆ. ಬಾಲಕನು ಜೋರಾಗಿ ಕಿರುಚಲು ಆರಂಭಿಸಿದಾಗ ಜನರು ಹಂದಿಯನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ ಹಂದಿಯು ದಾಳಿ ಮಾಡುವುದನ್ನು ಬಿಟ್ಟಿಲ್ಲ, ಬಾಲಕನನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸಿದೆ. ಅದೇ ಸಮಯದಲ್ಲಿ ಜನರು ಕಟ್ಟಿಗೆ ಹಾಗೂ ಭಾರವಾದ ಕಲ್ಲಿನಿಂದ ಹೊಡೆದ ನಂತರ ಹಂದಿ ಬಾಲಕನನ್ನು ಬಿಟ್ಟು ಓಡಿದೆ ಎಂದು ಬಾಲಕನ ತಂದೆ ದೇವೆಂದ್ರಪ್ಪ ರಾಠೋಡ ತಿಳಿಸಿದರು.
ಬಾಲಕನಿಗೆ ಮುಖ, ಕಿವಿ, ಕಾಲು, ಬೆನ್ನು, ಎರಡೂ ಕೈಗಳಿಗೆ ಹಂದಿಯೂ ಕಚ್ಚಿದೆ. ಅಲ್ಲಲ್ಲಿ ಜೋರಾಗಿ ಕಚ್ಚಿರುವ ಕಾರಣ ಬಾಲಕನಿಗೆ ಗಂಭೀರವಾದ ಗಾಯಗಳಾಗಿವೆ. ನಂತರ ಬಾಲಕನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಆ ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೋಷಕರು ಪತ್ರಿಕೆಗೆ ತಿಳಿಸಿದರು.
ಲಂಬಾಣಿ ತಾಂಡಾದಲ್ಲಿ ಗುತ್ತಿಗೆದಾರರು ಹಾಗೂ ಪುರಸಭೆ ಅಧಿಕಾರಿಗಳು ಅವೈಜ್ಞಾನಿಕವಾಗಿ ಅತೀ ಅಗಲವಾಗಿ ಚರಂಡಿಗಳನ್ನು ನಿರ್ಮಿಸಿರುವ ಕಾರಣ ಚರಂಡಿಯಲ್ಲಿ ಮಕ್ಕಳು, ವೃದ್ದರು ಬಿಳುವುದು ಸಾಮಾನ್ಯವಾಗಿದೆ.
ಅನೇಕರು ಬಿದ್ದು ದೊಡ್ಡ ಪ್ರಮಾಣದ ಗಾಯಗಳನ್ನು ಮಾಡಿಕೊಂಡು ಕೈಕಾಲುಗಳನ್ನು ಮುರಿದುಕೊಂಡಿದ್ದಾರೆ. ಆದ್ದರಿಂದ ಈ ಚರಂಡಿಯನ್ನು ನೀರು ಹರಿದು ಹೋಗಲು ಅಗತ್ಯವಿರುವಷ್ಟು ಮಾತ್ರ ಚಿಕ್ಕದಾಗಿ ನಿರ್ಮಿಸಲು ಮುಂದಾಗಬೇಕು ಎನ್ನುವುದು ಅಲ್ಲಿನ ನಿವಾಸಿಗಳ ಆಗ್ರಹವಾಗಿದೆ. ಒಂದು ವೇಳೆ ನಿರ್ಲಕ್ಷ ವಹಿಸಿ ಏನಾದರು ದುರ್ಘಟನೆಗಳು ನಡೆದರೆ ಅದಕ್ಕೆ ಪುರಸಭೆಯ ಅಧಿಕಾರಿಗಳೇ ಹೊಣೆಯಾಗಿದ್ದಾರೆ ತಾಂಡಾದ ನಿವಾಸಿಗಳು ಎಂದು ಎಚ್ಚರಿಕೆ ನೀಡಿದರು.
ಗಜೇಂದ್ರಗಡದಲ್ಲಿ ಹಂದಿಗಳ ಹಾವಳಿ ಮಿತಿಮೀರಿರುವ ಕಾರಣ ಮಕ್ಕಳ ಮೇಲೆ, ಅಂಗಡಿಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ. ಹಂದಿಗಳ ಹಾವಳಿಯಿಂದ ಲೆಕ್ಕವಿಲ್ಲದಷ್ಟು ಬೈಕ್‌ ಸವಾರರು ಬಿದ್ದು ಆಸ್ಪತ್ರೆ ಸೇರಿರುವ ಘಟನೆಗಳು ನಡೆದಿವೆ. ಹಂದಿಗಳಿಂದ ರೋಗ ಹರಡುವಿಕೆ ಹಾಗೂ ದಾಳಿಯಂತಹ ಅಪಘಾತಗಳು ನಡೆಸುತ್ತಿರುವ ಕಾರಣ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಕಾನೂನಿನ ನಿಯಮದಂತೆ ಹಂದಿಗಳನ್ನು ನಿಗದಿತ ಜಾಗದಲ್ಲಿ ಹಟ್ಟಿ ಹಾಕಿ ಸಾಕಬೇಕು ಇಲ್ಲವಾದರೆ ಪುರಸಭೆ ವ್ಯಾಪ್ತಿಯಲ್ಲಿ ಏನೇ ಘಟನೆ ನಡೆದರು ಹಂದಿಗಳ ಮಾಲಿಕರ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ತಾಂಡಾದ ಮಹಿಳೆಯರು ಆಗ್ರಹಿಸಿದ್ದಾರೆ. 
Post a Comment

Post a Comment