ಗದಗ : (Apr_17_2025)
"ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಸಂಖ್ಯೆ ಆಧಾರಿತ ಜನಗಣತಿಯನ್ನು ಒಪ್ಪಬೇಕು' ಎಂದು ನಿರಂತರವಾಗಿ ಪ್ರತಿಪಾದನೆ ಮಾಡುತ್ತ ಬಂದವರು. ಈ ಮೇಲ್ಜಾತಿ ರಾಜಕೀಯ ಒತ್ತಡಕ್ಕೆ ಮಣಿಯದೆ ಕಾಂತರಾಜು ವರದಿಯ ದತ್ತಾಂಶಗಳನ್ನು ಸರಕಾರ ಒಪ್ಪಿಕೊಂಡು ಅನುಷ್ಟಾನಗೊಳಿಸುವ ನೆಲೆಯಲ್ಲಿ ಒಂದು ಹೆಜ್ಜೆಯನ್ನು ಇಡಬೇಕು" ಎಂದು ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ಒತ್ತಾಯಿಸಿದರು.
ಗದಗ ಪಟ್ಟಣದ ಪತ್ರಿಕಾ ಭವನದಲ್ಲಿ ಕರ್ನಾಟಕ ಸರ್ಕಾರ ಜನಸಂಖ್ಯಾವಾರು ಮೀಸಲಾತಿಯನ್ನು ಬೆಂಬಲಿಸಿ ಕರ್ನಾಟಕ ಸರ್ಕಾರ ಜಾತಿ ಗಣತಿಯನ್ನು ಶೀಘ್ರದಲ್ಲೆ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
"ಈ ದೇಶ, ಕರ್ನಾಟಕ ರಾಜ್ಯದೊಳಗಡೆ ಬಲಾಡ್ಯ ಜಾತಿಗಳು ಸಮಾಜದಲ್ಲಿವೆ. ಅವು ಜನಸಂಖ್ಯೆ ಆಧಾರಿತವಾಗಿ ಕಡಿಮೆ ಸಂಖ್ಯೆಯಲ್ಲಿದ್ದರೂ ಕೂಡ ತಮ್ಮ ಸಾಮಾಜಿಕ ಪ್ರಧಾನ್ಯತೆ, ಆರ್ಥಿಕ ಸದೃಢತೆ ಮತ್ತು ರಾಜಕೀಯವನ್ನು ಮುಂದಿಟ್ಟುಕೊಂಡು ಸಮಾಜದಲ್ಲಿರುವ ಕೆಳ ಜಾತಿ, ಹಿಂದುಳಿದ ಜಾತಿಗಳನ್ನು ನಿಯಂತ್ರಿಸುವ ಕೆಲಸ ಮಾಡಿಕೊಂಡು ಬಂದಿವೆ. ಇವತ್ತಿಗೂ ಕೂಡ ಕಾಂತರಾಜು ವರದಿಯನ್ನು ಜಾರಿಗೊಳಿಸಬಾರದೆಂದು ಚರ್ಚೆಗಳಿವೆ. ಚರ್ಚೆಗಳ ಹಿಂದೆ ಈ ಬಲಾಡ್ಯ ಜಾತಿಗಳಿವೆ. ಈ ಬಲಾಡ್ಯ ಜಾತಿಗಳ ಸರ್ವಾಧಿಕಾರತ್ವ ಇವತ್ತು ಕರ್ನಾಟಕದಲ್ಲಿ ಎದ್ದು ಕಾಣುತ್ತಿದೆ. ಹಾಗಾಗಿ ಜಾತಿ ಗಣತಿಯನ್ನು ಒಪ್ಪುತ್ತಿಲ್ಲ "ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
"ಕಾಂತರಾಜು ವಾರದಿಯನ್ನು ವಿರೋಧ ಮಾಡುವ ಶಕ್ತಿಗಳು, ಈ ವರದಿಗೆ ಕಾಂತರಾಜು ಅವರನ್ನು ನೇಮಕ ಮಾಡಿದಾಗ ಯಾಕೆ ವಿರೋಧಿಸಲಿಲ್ಲ. ಕಾಂತರಾಜು ವರದಿಯನ್ನು ಕಟ್ಟಿಕೊಡಲು ಜಯಪ್ರಕಾಶ ಹೆಗಡೆ ಅವರು ಆಯೋಗವನ್ನು ನೇಮಕ ಮಾಡ್ತಾರೆ. ಇವು ಕಾರ್ಯನಿರ್ವಹಿಸುವಾಗ ಅವೈಜ್ಞಾನಿಕ ವಿಚಾರಗಳು ಎಂದು ಹೇಳುವವರು ಅವುಗಳನ್ನು ಯಾಕೆ ಆಯೋಗದ ಮುಂದೆ ಇಡಲಿಲ್ಲ. ಹಾಗೆ ಈ ಬಲಾಡ್ಯ ಜಾತಿಗಳು ಕಾಂತರಾಜು ವರದಿ ಸಂಪರ್ಕ ಮಾಡಿದ ಉದಾಹರಣೆಗಳಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ರಾಜ್ಯದ ಮಠಾಧೀಶರು ಮತ್ತು ರಾಜಕಾರಣಿಗಳನ್ನು ಒಳಗೊಂಡು ಬಲಾಡ್ಯ ಜಾತಿಯ ಹಿರಿಮೆಯನ್ನು ಉಳಿಸಿಕೊಳ್ಳಲು ಕಾಲ್ಪನಿಕ ಜನಸಂಖ್ಯೆಗಳನ್ನು ಕೊಡುವ ಮೂಲಕ ನಿಯಂತ್ರಣ ಮಾಡುತ್ತಿರುವುದು, ತಮ್ಮ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ " ಎಂದು ಹೇಳಿದರು.
"ಎಸ್ಸಿ ಎಸ್ಟಿಗಳ ಜನಸಂಖ್ಯೆಹೆಚ್ಚಾಗಿದೆ. ಅವುಗಳನ್ನು ವಾಸ್ತವವಾಗಿ ಒಪ್ಪಿಕೊಳ್ಳಬೇಕು. ಕಾಂತರಾಜು ವರದಿ ಕೇವಲ ಜಾತಿಗಣತಿ ಅಷ್ಟೇ ಅಲ್ಲ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನ ಕೂಡ ಅದರಲ್ಲಿದೆ. ಹಿಂದೆ ಬಿಜೆಪಿ ಅಧಿಕಾರದ ಅವಧಿಯಲ್ಲಿಯೇ ಜಯಪ್ರಕಾಶ ಹೆಗಡೆ ಅವರು ಸರಕಾರಕ್ಕೆ ಮಧ್ಯಂತರ ವರದಿಯನ್ನು ಕೊಟ್ಟಿತ್ತು" ಎಂಬುದನ್ನು ತಿಳಿಸಿದರು.
"ಇವತ್ತು ಯಾಕೆ ಜಾತಿಗಣತಿಯನ್ನು ವಿರೋಧ ಮಾಡುತ್ತಿದ್ದಾರೆ. ಈ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಧ್ಯಯನಕ್ಕಾಗಿ ನೇಮಕವಾಗಿದ್ದ ಯಾವ ವರದಿಗಳನ್ನು ಮೇಲ್ಜಾತಿಯವರು ಒಪ್ಪಿಕೊಂಡಿಲ್ಲ. ಹಾವನೂರು ವರದಿಯನ್ನು ಒಪ್ಪಿಕೊಂಡಿಲ್ಲ. ಚಿನ್ನಪ್ಪ ವರದಿಯನ್ನು ಒಪ್ಪಿಕೊಂಡ ಉದಾಹರಣೆಗಳೇ ಇಲ್ಲ" ಎಂದು ಬಸವರಾಜ ಸೂಳಿಬಾವಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಗತಿಪರ ಚಿಂತಕರು ಬಸವರಾಜ ಪೂಜಾರ, ಹೋರಾಟಗಾರರು ಮುತ್ತು ಬಿಳಿಯಲಿ, ಶರೀಫ ಬಿಳಿಯಲಿ, ಬಾಲರಾಜ್ ಅರಬರ, ಅನಿಲ ಕಾಳೆ, ಪರಸು ಕಾಳೆ ಹಾಗೂ ಆನಂದ ಶಿಂಗಾಡಿ ಉಪಸ್ಥಿತರಿದ್ದರು.
Post a Comment