"ಅರಣ್ಯ ಇಲಾಖೆ ಹಾಗೂ ರೈತರು ಬೆಳೆಸಿದ ಮರಗಳ ಮಾರಣಹೋಮ!"
---
ಗಜೇಂದ್ರಗಡ ತಾಲ್ಲೂಕಿನ ಸೂಡಿ ಸಮೀಪ ಪವನ ವಿದ್ಯುತ್ ವಿಂಡ್ ಕಂಪನಿಯವರು ನಡೆಸುತ್ತಿರುವ ಪರಿಸರ ಮಾರಣಹೋಮ ನಡೆಸಿದ್ದಾರೆ. ಕಳೆದ 10–15 ವರ್ಷಗಳಿಂದ ಅರಣ್ಯ ಇಲಾಖೆ ಅತ್ಯಂತ ಶ್ರಮಪಟ್ಟು, ಗ್ರಾಮಸ್ಥರು ಹಾಗೂ ರೈತರ ಸತತ ಸಹಕಾರದಿಂದ ಸಂರಕ್ಷಿಸಿಕೊಂಡು ಬಂದಿದ್ದ ಸುಮಾರು 15ಕ್ಕೂ ಹೆಚ್ಚುಗಿಡಗಳನ್ನು ಕಂಪನಿಯು ತನ್ನ ಸ್ವಾರ್ಥಕ್ಕಾಗಿ ಧ್ವಂಸಗೊಳಿಸಿದೆ. ಇದಕ್ಕೆ ಅರಣ್ಯ ಇಲಾಖೆಯ ಅನುಮತಿಯು ಸಹ ಪಡೆದಿಲ್ಲ.
ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಿದ ಮಾತ್ರಕ್ಕೆ ಹೋದ ಗಿಡಗಳು ಮರಳಿ ಬರಲು ಸಾಧ್ಯವೇ?. ಕಳೆದುಹೋದ ಆ 15 ವರ್ಷಗಳ ಹಸಿರು ಹಾಗೂ ನೆರಳನ್ನು ಹಣದಿಂದ ಮರುಸೃಷ್ಟಿಸಲು ಸಾಧ್ಯವೇ? ಕಂಪನಿಗಳು ಲಾಭ ಗಳಿಸಿ ಇಲ್ಲಿಂದ ಹೊರಟುಹೋಗುತ್ತವೆ; ಆದರೆ ಇಲ್ಲಿನ ನೆಲ, ಜಲ ಮತ್ತು ಪರಿಸರದ ಜೊತೆ ಬದುಕಬೇಕಾದವರು ನಾವು. ಈಗಾಗಲೇ ತೀವ್ರ ಬರಗಾಲ ಎದುರಿಸುತ್ತಿರುವ ಈ ಭಾಗದಲ್ಲಿ ಇರುವ ಅಲ್ಪಸ್ವಲ್ಪ ಮರಗಳನ್ನೂ ಕಡಿದುಹಾಕಿದರೆ, ಮುಂದಿನ ದಿನಗಳಲ್ಲಿ ಇಲ್ಲಿ ಭೀಕರ ಬರಗಾಲ ತಾಂಡವವಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
ವಿಂಡ್ ಕಂಪನಿಯ ಈ ಬೇಜವಾಬ್ದಾರಿ ಹಾಗೂ ದುರಹಂಕಾರದ ಕೃತ್ಯವನ್ನು ನಮ್ಮ ‘ಗ್ರೀನ್ ಆರ್ಮಿ’ ತಂಡ ಉಗ್ರವಾಗಿ ಖಂಡಿಸುತ್ತದೆ. ಕೇವಲ ನಾಮಕಾವಸ್ಥೆ ದಂಡ ವಿಧಿಸದೆ, ಈ ಕೆಳಗಿನ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ:
1.ಸಂಬಂಧಪಟ್ಟ ಕಂಪನಿಯ ವಿರುದ್ಧ ಕಠಿಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
2.ಕಡಿದ ಪ್ರತಿಯೊಂದು ಮರದ ಬದಲಾಗಿ ನೂರು ಪಟ್ಟು ಹೊಸ ಸಸಿಗಳನ್ನು ಅವರ ವೆಚ್ಚದಲ್ಲೇ ನೆಡಿಸಬೇಕು.
3.ಆ ಸಸಿಗಳು ಮರಗಳಾಗಿ ಬೆಳೆಯುವವರೆಗೆ ಕನಿಷ್ಠ 20 ವರ್ಷಗಳ ಕಾಲ ಅವುಗಳ ಪೋಷಣೆಗೆ ಕಂಪನಿಯೇ ಇಬ್ಬರು ಕಾಯಂ ಕೂಲಿ ಕಾರ್ಮಿಕರನ್ನು ನೇಮಿಸಿ ಅವರ ವೇತನ ಭರಿಸಬೇಕು.
ಇಂದೇ ನಾವು ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ಮುಂದಿನ ಪೀಳಿಗೆ ಮರಗಳೇ ಇಲ್ಲದ ಬರಡು ನಾಡಿನಲ್ಲಿ ಬದುಕಬೇಕಾಗುತ್ತದೆ. ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ-ಸಂಸ್ಥೆಗಳು, ವಿದ್ಯಾವಂತರು, ರೈತ ಬಾಂಧವರು ಮತ್ತು ಪರಿಸರ ಪ್ರೇಮಿಗಳು ಪಕ್ಷಾತೀತವಾಗಿ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು.
"ಮರಗಳ ಮಾರಣಹೋಮ ನಿಲ್ಲಲಿ, ನಮ್ಮ ಹಸಿರು–ನಮ್ಮ ಉಸಿರು ಉಳಿಯಲಿ!"
—
ಚಂದ್ರು ಎಂ. ರಾಥೋಡ್, ಗ್ರೀನ್ ಆರ್ಮಿ ತಂಡ



Post a Comment