-->
Bookmark

Crime : ಮೊಬೈಲ್ ಕೊಡದ ತಾಯಿ : ಹೆತ್ತವಳ ಕೊಲೆಗೆ ಮಗಳ ಯತ್ನ

ಮೊಬೈಲ್ ಕೊಡದ ತಾಯಿ : ಹೆತ್ತವಳ ಕೊಲೆಗೆ ಮಗಳ ಯತ್ನ 

ಮೊಬೈಲ್‌ನಲ್ಲಿ ಹೆಚ್ಚು ಆಡವಾಡುವ, ಅದನ್ನು ಗೀಳಾಗಿಸಿಕೊಂಡಿರುವ ಮಕ್ಕಳನ್ನು ನೋಡಿರುತ್ತೇವೆ. ಒಂದು ವೇಳೆ ಮೊಬೈಲ್‌ ನೀಡದಿದ್ದರೆ, ಕೊಡಿಸದಿದ್ದರೆ ಮುನಿಸಿಕೊಳ್ಳುವುದು ಅಥವಾ ಹಠ ಮಾಡುವುದನ್ನು ನೋಡಿರುತ್ತೇವೆ. ಕೆಲವರಂತೂ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಓದಿರುತ್ತೇವೆ. ಆದರೆ ಈ ಘಟನೆ ಮಾತ್ರ ಇನ್ನೂ ವಿಚಿತ್ರವಾಗಿದೆ. ಮೊಬೈಲ್‌ ಕೊಡದೆ ಕಟ್ಟುನಿಟ್ಟು ಮಾಡಿದ ಹೆತ್ತ ತಾಯಿಯನ್ನೇ ಕೊಲ್ಲಲು ಪ್ರಯತ್ನಿಸಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.
ಈ ಪ್ರಕರಣದಲ್ಲಿ 13 ವರ್ಷದ ಬಾಲಕಿ ಇಡೀ ದಿನ ಮೊಬೈಲಿನಲ್ಲೇ ಮುಳುಗಿರುತ್ತಿದ್ದಳು. ಸ್ನೇಹಿತರೊಟ್ಟಿಗೆ ಚಾಟ್‌ ಮಾಡೋದು, ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್‌ ನೋಡೋದು. ಹೀಗೆ ದಿನವಿಡಿ ಮೊಬೈಲ್‌ ಫೋನಿನಲ್ಲೇ ನಿರತವಾಗಿದ್ದ ಬಾಲಕಿ, ಓದುತ್ತಿರಲಿಲ್ಲ. ಇದನ್ನು ಗಮನಿಸಿದ ತಾಯಿ ಕೆಲವು ದಿನಗಳ ಹಿಂದೆ ಬಾಲಕಿಯ ಬಳಿ ಇದ್ದ ಮೊಬೈಲ್ ಫೋನ್ ಕಿತ್ತುಕೊಂಡು ವಾಪಸ್ ಕೊಡುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ್ದರು.
ನಂತರ ಕೆಲ ದಿನಗಳಲ್ಲಿ ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯಲು ಶುರುವಾದವು. ಸಕ್ಕರೆ ಡಬ್ಬದಲ್ಲಿ ಕೀಟನಾಶಕದ ಪುಡಿ ಸಿಗುತ್ತಿತ್ತು. ಬಚ್ಚಲು ಮನೆಯಲ್ಲಿ ಫೆನಾಯಿಲ್ ಸುರಿದ ದ್ರವ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಗಾಬರಿಯಾದ ಪೋಷಕರು ಸಮಸ್ಯೆಗೆ ಏನು ಕಾರಣವೆಂದು ಅಭಯಂ ಎಂಬ ಆಪ್ತ ಸಮಾಲೋಚನಾ ಸಹಾಯವಾಣಿಗೆ ಕರೆ ಮಾಡಿದ್ದಾರೆ.

ಪೋಷಕರ ಮನವಿಯ ಮೇರೆಗೆ ಆಗಮಿಸಿದ ಸಹಾಯವಾಣಿ ಸಿಬ್ಬಂದಿ ಹಾಗೂ ಮನಃಶಾಸ್ತ್ರಜ್ಞರು ಮನೆಯವರ ನಂತರ ಬಾಲಕಿಯನ್ನು ಕೌನ್ಸೆಲಿಂಗ್ ನಡೆಸಿದಾಗ ಶಾಕಿಂಗ್ ಸಂಗತಿ ಹೊರಬಿದ್ದಿದೆ. ತನಗೆ ಮೊಬೈಲ್‌ ನೀಡದ ಕಾರಣಕ್ಕಾಗಿ ತಾಯಿಯನ್ನು ಕೊಲೆ ಮಾಡಲು ಈ ರೀತಿಯಲ್ಲಿ ಸಂಚು ಮಾಡಿರುವುದಾಗಿ ಮಗಳು ಆಪ್ತ ಸಮಾಲೋಚನಾ ಸಿಬ್ಬಂದಿಗೆ ಬಾಯಿ ಬಿಟ್ಟಿದ್ದಾಳೆ. ಸದ್ಯ ಸಮಾಲೋಚನಾ ಸಿಬ್ಬಂದಿ ಬಾಲಕಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
Post a Comment

Post a Comment