-->
Bookmark

Gajendragad : ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರ ಕೊಡುಗೆ ಅಪಾರ

Gajendragad : ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರ ಕೊಡುಗೆ ಅಪಾರ
ಪಾದಯಾತ್ರೆ ಮಾಡಿದ ಸಂಘಟಿಕರಿಗೆ ಅಭಿನಂದನಾ ಸಮಾರಂಭ  

ಸರ್ಕಾರದ ಸ್ಮಾರಕ ನಿರ್ಮಾಣ ನಿರ್ಧಾರ ಸ್ವಾಗತಾರ್ಹ - ಶರಣಪ್ಪ ರೇವಡಿ

ಗಜೇಂದ್ರಗಡ : ( Oct_11_2023)
ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ, ಕರ್ನಾಟಕ ಏಕೀಕರಣಕ್ಕೆ, ಕನ್ನಡ ನಾಡು ನುಡಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಏಕೀಕರಣದ ರೂವಾರಿ ದಿ. ಅಂದಾನಪ್ಪ ದೊಡ್ಡಮೇಟಿಯವರ ಕೊಡುಗೆ ಅಪಾರವಾಗಿದೆ ಎಂದು ಗಜೇಂದ್ರಗಡದ ಹಿರಿಯ ಮುಖಂಡ ಶರಣಪ್ಪ ರೇವಡಿ ಹೇಳಿದರು.

ಮುಖ್ಯಮಂತ್ರಿಗಳು ಅಂದಾನಪ್ಪ ದೊಡ್ಡಮೇಟಿಯವರ ಸ್ಮಾರಕ ನಿರ್ಮಾಣಕ್ಕೆ ಸಮ್ಮತಿ ಸೂಚಿಸಿದ ಹಿನ್ನಲೆಯಲ್ಲಿ ಗಜೇಂದ್ರಗಡದಲ್ಲಿ ಆಯೋಜಿಸಿದ ಸ್ಮಾರಕ ನಿರ್ಮಾಣಕ್ಕಾಗಿ ಪಾದಯಾತ್ರೆ ಮಾಡಿದ ಸಂಘಟಿಕರಿಗೆ ಅಭಿನಂದನಾ ಹಾಗೂ ಕನ್ನಡ ಕಟ್ಟಾಳು ದಿ. ಈಶ್ವರಪ್ಪ ರೇವಡಿಯವರಿಗೆ ಗೌರವ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದರು.

ಸರಳ ಸಜ್ಜನಿಕೆ ರಾಜಕಾರಣ ಹಾಗೂ ಸಾಹಿತಿಯೂ ಆಗಿದ್ದ ದೊಡ್ಡಮೇಟಿಯವರ ಸಮಾಧಿ ಸ್ಥಳಗಳು ಅನಾಥವಾಗಿ ದುಸ್ಥಿತಿಗೆ ತಲುಪಿ ಎಷ್ಟೋ ವರ್ಷಗಳೆ ಕಳೆದಿದ್ದವು. ಇದಕ್ಕಾಗಿ ಐದು ದಶಕಗಳಿಂದ ನಿರಂತರ ಹೋರಾಟ ನಡೆದಿತ್ತು. ಆದರೆ ಶಾಸಕ ಜಿ. ಎಸ್.‌ ಪಾಟೀಲರ ವಿಶೇಷ ಆಸಕ್ತಿ ಹಾಗೂ ಒತ್ತಡ ಮತ್ತು ಈಗಿನ ಸರ್ಕಾರದ ಸೂಕ್ತ ನಿರ್ಧಾರದಿಂದ ಉತ್ತಮ ನಡೆ ಕಂಡು ಬಂದಿದೆ ಎಂದರು.

ಕರ್ನಾಟಕ ಅಭಿವೃದ್ದಿ ವೇದಿಕೆಯ ರಾಜ್ಯಾಧ್ಯಕ್ಷ ವಿನಾಯಕ ಮು. ಜರತಾರಿ ಮಾತನಾಡಿ, ಸ್ಮಾರಕ ನಿರ್ಮಾಣಕ್ಕಾಗಿ ಗಜೇಂದ್ರಗಡ ದಿಂದ ಸೂಡಿ, ಕಳಕಾಪುರ, ಮಾರನಬಸರಿ ಮೂಲಕ ಜಕ್ಕಲಿಯ ಸಮಾಧಿ ಸ್ಥಳದ ವರೆಗೆ ಪಾದಯಾತ್ರೆ ಕೈಗೊಂಡು ಹೋರಾಟ ಮಾಡಿದಾಗ ಜನರು ಅಭೂತಪೂರ್ವವಾಗಿ ಸಹಕಾರ ನೀಡಿದರು. ಪ್ರತಿ ಗ್ರಾಮದಲ್ಲೂ ಪ್ರೀತಿಯಿಂದ ಸ್ವಾಗತ ಕೋರಿ, ಉಪಚರಿಸಿದರು ಎಂದರು. ಆನಂತರದ ದಿನಗಳಲ್ಲಿ ಸಂಘಟನೆಯಿಂದ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಭೇಟಿಯಾಗಿಯೂ ಮನವಿ ಸಲ್ಲಿಸಿದ್ದೇವೆ. ಆದರೆ ವರ್ಷದೊಳಗಾಗಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಎಂದರು. 

ವಿಧಾನಸೌಧ ಮತ್ತು ಶಾಸಕರ ಭವನದ ಮಧ್ಯದಲ್ಲಿ ನಿರ್ಮಿಸಲು ಮುಂದಾಗಿರುವ ಕನ್ನಡ ಭುವನೇಶ್ವರಿಯ ಪ್ರತಿಮೆಯನ್ನು ದಿ. ಅಂದಾನಪ್ಪ ದೊಡ್ಡಮೇಟಿಯವರ ಕಲ್ಪನೆಯಂತೆ ಗದಗ ನಗರದ ಚಿತ್ರ ಕಲಾವಿದ ಸಿ.ಎನ್. ಪಾಟೀಲರು 11ನೇ ಜನವರಿ 1953 ರಂದು ನಿರ್ಮಿಸಿದ ಭುವನೇಶ್ವರಿಯ ತೈಲ ಚಿತ್ರವನ್ನು ಕರ್ನಾಟಕದ ಮೊದಲ ಭುವನೇಶ್ವರಿಯ ಚಿತ್ರವೆಂದು ಪರಿಗಣಿಸಿ ಅದನ್ನೇ ವಿಧಾನಸೌಧ ಹಾಗೂ ಭವನದ ಮಧ್ಯದಲ್ಲಿ ನಿರ್ಮಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ನಿವೃತ್ತ ಶಿಕ್ಷಕ ಎಂ. ಎಸ್.‌ ಧಡೆಸೂರಮಠ ಮಾತನಾಡಿ, ಕಸಾಪದ ನಿಕಟಪೂರ್ವ ಅಧ್ಯಕ್ಷ ಹಾಗೂ ದಿ. ಈಶ್ವರಪ್ಪ ರೇವಡಿಯವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದೊಡ್ಡಮೇಟಿಯವರ ಮನೆಯಲ್ಲಿರುವ ಭುವನೇಶ್ವರಿಯ ಪ್ರತಿಮೆಯ ಭಾವಚಿತ್ರ ಮಾಡಿಸಿದರು. ಸರ್ಕಾರಿ, ಖಾಸಗಿ ಸಂಸ್ಥೆಗಳ ಕಚೇರಿ, ಶಾಲಾ ಕಾಲೇಜುಗಳಲ್ಲಿ, ಸಂಘಟಿಕರ ಕಚೇರಿಯಲ್ಲಿ, ಸಾಹಿತಿಗಳಿಗೆ ಸೇರಿದಂತೆ ಎಲ್ಲರಿಗೂ ಜಿಲ್ಲಾದ್ಯಂತ ಉಚಿತವಾಗಿ ವಿತರಣೆ ಮಾಡಿದರು ಎಂದರು. ಅಂದಾನಪ್ಪನವರ ಸ್ಮಾರಕ ನಿರ್ಮಾಣಕ್ಕೆ ಹಾಗೂ ಭುವನೇಶ್ವರಿ ತೈಲವರ್ಣದ ಚಿತ್ರವು ಕರ್ನಾಟಕದ ಅಧಿಕೃತ ಚಿಹ್ನೆಯನ್ನಾಗಿ ಸರ್ಕಾರ ಘೋಷಣೆ ಮಾಡಬೇಕು ಎಂದು ನಿರಂತರವಾಗಿ ಹೋರಾಟ ಮಾಡಿದರು ಎಂದು ಸ್ಮರಿಸಿದರು.

ಅಂದಾನಪ್ಪ ದೊಡ್ಡಮೇಟಿಯವರ ಮೊಮ್ಮಗ ಸಂದೇಶ ದೊಡ್ಡಮೇಟಿ ಹಾಗೂ ಮಂಜುಳಾ ಈಶ್ವರಪ್ಪ ರೇವಡಿಯವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಾದಯಾತ್ರೆ ಮಾಡಿದ ಕರ್ನಾಟಕ ಅಭಿವೃದ್ದಿ ವೇದಿಕೆಯ ಸಂಘಟಿಕರಿಗೆ, ಹಿರಿಯರಾದ ಶರಣಪ್ಪ ರೇವಡಿಯವರಿಗೆ ಹಾಗೂ ದಿ. ಈಶ್ವರಪ್ಪ ರೇವಡಿಯವರ ಭಾವಚಿತ್ರಕ್ಕೆ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ  ಹೂವಾಜಿ ಚಂದೂಕರ , ರೇಣುಕಾ ಏವೂರ, ಜೀವನಸಾಬ ಸರ್ಕಾವಸ್,   ರವಿಶಾಸ್ತ್ರೀ ಗೋಂಧಳೆ, ಪ್ರಕಾಶ ರಾಠೋಡ, ಅಂದಪ್ಪ ರಾಠೋಡ, ನೀಲಪ್ಪ ಚಲವಾದಿ, ಮಾರುತಿ ಹಾದಿಮನಿ, ಲಕ್ಷ್ಮಣ ಬಂಕದ, ಕನಕಪ್ಪ ಕಲ್ಲವಡ್ಡರ, ಆಂಜನೇಯ ಮುತಗಾರ, ಅನೀಲ ಕರ್ಣೆ, ಅಬ್ದೂಲಸಾಬ್‌ ಹುಡೇದ, ಪರಶುರಾಮ ಬಡಿಗೇರ, ರಾಘವೇಂದ್ರ ಕೊನ್ನುರಕರ, ಮಲ್ಲಿಕಾರ್ಜುನ ಗೊಗೇರಿ, ಬಸವರಾಜ ರೇವಡಿ ಇದ್ದರು.

Post a Comment

Post a Comment