ಪಠ್ಯಕ್ಕೆ ಜೊತೆಗೆ ಎಐ, ಮೆಷಿನ್ ಲರ್ನಿಂಗ್ ತಂತ್ರಜ್ಞಾನ ಕಲಿಯಿರಿ
ನರೇಗಲ್ ಸರ್ಕಾರಿ ಕಾಲೇಜಿನಲ್ಲಿ ‘ಮೆಷಿನ್ ಲರ್ನಿಂಗ್ ಆಲ್ಗಾರಿದಮ್ಗಳ ಅನ್ವೇಷಣೆʼ ಬಗ್ಗೆ ಕಾರ್ಯಾಗಾರ
--
ನರೇಗಲ್ : (Aug_14_2026)
ಇಂದಿನ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಮೆಷಿನ್ ಲರ್ನಿಂಗ್ (ಎಂಎಲ್) ತಂತ್ರಜ್ಞಾನಗಳು ಪ್ರತಿಯೊಂದು ಕ್ಷೇತ್ರದಲ್ಲೂ ಮಹತ್ವದ ಪಾತ್ರ ವಹಿಸುತ್ತಿವೆ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಇಂತಹ ಹೊಸ ತಂತ್ರಜ್ಞಾನಗಳನ್ನು ಕಲಿಯುವುದು ಅತ್ಯಗತ್ಯ ಎಂದು ಹುಲಕೋಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಅರುಣಕುಮಾರ ಹೇಳಿದರು.
ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ‘ಮೆಷಿನ್ ಲರ್ನಿಂಗ್ ಆಲ್ಗಾರಿದಮ್ಗಳ ಅನ್ವೇಷಣೆʼ ಬಗ್ಗೆ ಗುರುವಾರ ಆಯೋಜನೆ ಮಾಡಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮುಖ್ಯ
ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.
ಮಾನವರು ತಮ್ಮ ಬುದ್ಧಿಶಕ್ತಿ ಬಳಸಿ ಮಾಡುವ ಕಲಿಕೆ, ಸಮಸ್ಯೆ ಪರಿಹಾರ, ನಿರ್ಧಾರ ಕೈಗೊಳ್ಳುವಿಕೆ ಹಾಗೂ ಭಾಷೆ ಅರ್ಥೈಸುವಿಕೆಯಂತಹ ಸಾಮರ್ಥ್ಯಗಳನ್ನು ಕಂಪ್ಯೂಟರ್ ಪ್ರೋಗ್ರಾಂಗಳ ಮೂಲಕ ಪೂರೈಸುವುದೇ ಕೃತಕ ಬುದ್ಧಿಮತ್ತೆ. ಇದು ದೈನಂದಿನ ಜೀವನದ ಭಾಗವಾಗಿದ್ದು, ಜನರ ಶ್ರಮ ಮತ್ತು ಸಮಯವನ್ನು ಉಳಿಸುತ್ತದೆ ಎಂದರು. ಮೆಷಿನ್ ಲರ್ನಿಂಗ್ನ ಮೂಲಭೂತ ತತ್ವಗಳು, ಸೂಪರ್ವೈಸ್ಡ್ ಮತ್ತು ಅನ್ಸೂಪರ್ವೈಸ್ಡ್ ಲರ್ನಿಂಗ್, ಡಾಟಾ ವಿಶ್ಲೇಷಣೆ ಹಾಗೂ ಆಲ್ಗಾರಿದಮ್ಗಳು ದಿನನಿತ್ಯದ ಜೀವನದಲ್ಲಿ ಹೇಗೆ ಬಳಕೆಯಾಗುತ್ತಿವೆ ಎಂಬುದನ್ನು ವಿವರಿಸಿದರು. ಆರೋಗ್ಯ ಕ್ಷೇತ್ರ, ಕೃಷಿ, ಹಣಕಾಸು ಹಾಗೂ ರೊಬೊಟಿಕ್ಸ್ ಕ್ಷೇತ್ರಗಳಲ್ಲಿ ಮೆಷಿನ್ ಲರ್ನಿಂಗ್ ಉಂಟುಮಾಡುತ್ತಿರುವ ಕ್ರಾಂತಿಕಾರಿ ಬದಲಾವಣೆಗಳ ಕುರಿತು ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕಸ್ತೂರೆವ್ವ ದಳವಾಯಿ, ಆಯಾ ಕಾಲಘಟ್ಟದ ತಂತ್ರಜ್ಞಾನ ಸಂಶೋಧನೆಗಳು ಮಾನವ ಸಮಾಜವನ್ನು ಬಹುವಾಗಿ ಬದಲಿಸಿವೆ ಮತ್ತು ಈಗಲೂ ಬದಲಿಸುತ್ತಿವೆ. ಎಐ ಮತ್ತು ಎಂಎಲ್ಗಳು ಆಧುನಿಕ ಮಾನವನ ಅಂತದ್ದೊಂದು ಅಪರೂಪದ ಮತ್ತು ಕ್ರಾಂತಿಕಾರಿ ಸಂಶೋಧನೆಯಾಗಿದೆ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಐಕ್ಯೂಎಸಿ ಸಂಚಾಲಕಿ ಜಯಶ್ರೀ ಮುತಗಾರ ಮಾತನಾಡಿ, ಕಂಪ್ಯೂಟರ್ ತಂದ ಕ್ರಾಂತಿಯನ್ನು ಎಐ ಹಾಗೂ ಎಂಎಲ್ಗಳು ಮುಂದಕ್ಕೆ ಒಯ್ಯುತ್ತಿವೆ. ಈ ತಂತ್ರಜ್ಞಾನದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಎರಡೂ ಮುಖಗಳಿದ್ದು, ವಿದ್ಯಾರ್ಥಿಗಳು ಧನಾತ್ಮಕ ಅಂಶಗಳನ್ನು ಸ್ವೀಕರಿಸಿ ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧರಾಗಬೇಕು ಎಂದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಎಚ್ಒಡಿ ಶಶಿಕಲಾ ವಿ. ಎಸ್. ಮಾತನಾಡಿ, ಜಾಗತಿಕ ಮಟ್ಟದ ತಾಂತ್ರಿಕ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಕಾಲೇಜಿನಿಂದ ನಿರಂತರವಾಗಿ ಇಂತಹ ಗುಣಮಟ್ಟದ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಎಸ್. ಎಸ್. ಸೂಡಿ, ಶಿವಪ್ಪ ಕುರಬರ ಹಾಗೂ ವಿದ್ಯಾರ್ಥಿಗಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.



Post a Comment