-->
Bookmark

Naregal : ಪದವೀಧರರಿಗೆ ಕೌಶಲ್ಯವೇ ಉದ್ಯೋಗದ ಕೀಲಿಕೈಉದ್ಯೋಗಾವಕಾಶಗಳ ಹೆಬ್ಬಾಗಿಲು ತೆರೆಯಲು ಕೌಶಲ್ಯಾಭಿವೃದ್ಧಿ ಅನಿವಾರ್ಯ

Naregal : ಪದವೀಧರರಿಗೆ ಕೌಶಲ್ಯವೇ ಉದ್ಯೋಗದ ಕೀಲಿಕೈ

ಉದ್ಯೋಗಾವಕಾಶಗಳ ಹೆಬ್ಬಾಗಿಲು ತೆರೆಯಲು ಕೌಶಲ್ಯಾಭಿವೃದ್ಧಿ ಅನಿವಾರ್ಯ

ಕ್ಯಾಂಪಸ್ ಪ್ಲೇಸ್‌ಮೆಂಟ್‌ ಹಾಗೂ ದೇಶಸೇವೆಗೆ ನರೇಗಲ್ ಕಾಲೇಜು ವಿದ್ಯಾರ್ಥಿಗಳ ಮುಂದು: ಉದ್ಯೋಗ ಕೋಶದ ಹೆಮ್ಮೆ

ನರೇಗಲ್ ಸರ್ಕಾರಿ ಪದವಿ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಹಾಗೂ ‘ಯುವನಿಧಿ’ ನೋಂದಣಿ ಕಾರ್ಯಕ್ರಮ
----
ನರೇಗಲ್:‌ (Naregal_21_08_2026)

ಪ್ರಸ್ತುತ ತೀವ್ರ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆ ಕೇವಲ ಪದವಿ ಶಿಕ್ಷಣಕ್ಕೆ ಸೀಮಿತವಾಗದೆ, ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಉನ್ನತ ಉದ್ಯೋಗಾವಕಾಶಗಳನ್ನು ಪಡೆಯಲು ಸಾಧ್ಯ ಎಂದು ಗದಗ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಸಹಾಯಕ ಉದ್ಯೋಗಾಧಿಕಾರಿ ಎಚ್. ಎಂ. ಬಡಿಗೇರ ತಿಳಿಸಿದರು.
           ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆಕಾಲೇಜು ಹಾಗೂ ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ವೃತ್ತಿ ಮಾರ್ಗದರ್ಶನ ಮತ್ತು ಯುವನಿಧಿ ಯೋಜನೆಯ ಸಂಚಾರಿ ನೋಂದಣಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
  ಪದವಿ ಪೂರ್ಣಗೊಳಿಸಿದ ನಂತರ ಅಭ್ಯರ್ಥಿಗಳಿಗೆ ಯುಪಿಎಸ್‌ಸಿ, ಕೆಪಿಎಸ್‌ಸಿ, ಬ್ಯಾಂಕಿಂಗ್, ಎಸ್‌ಎಸ್‌ಸಿ ಹಾಗೂ ರೈಲ್ವೆ ಸೇರಿದಂತೆ ವಿವಿಧ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ವಿಶಾಲ ಅವಕಾಶಗಳಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಐಟಿ, ಹಣಕಾಸು, ಮಾರ್ಕೆಟಿಂಗ್, ಶಿಕ್ಷಣ ಹಾಗೂ ಮಾನವ ಸಂಪನ್ಮೂಲ (ಎಚ್‌ಆರ್) ವಲಯಗಳಲ್ಲಿ ಪದವೀಧರರಿಗೆ ಅಪಾರ ಬೇಡಿಕೆಯಿದೆ. ಡಿಜಿಟಲ್ ಕೌಶಲ್ಯಗಳು, ಸಂವಹನ ಕಲೆ ಹಾಗೂ ವೃತ್ತಿಪರ ಸರ್ಟಿಫಿಕೇಶನ್‌ಗಳನ್ನು ಪಡೆಯುವ ಮೂಲಕ ಉನ್ನತ ಹುದ್ದೆಗಳನ್ನು ಸುಲಭವಾಗಿ ಗಿಟ್ಟಿಸಿಕೊಳ್ಳಬಹುದು ಎಂದು ವಿವರಿಸಿದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಕಸ್ತೂರೆವ್ವ ದಳವಾಯಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ಇಂತಹ ವೃತ್ತಿಪರ ಹಾಗೂ ಪ್ರಾಯೋಗಿಕ ಮಾರ್ಗದರ್ಶನ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತವಾಗಿವೆ. ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಕಾಲೇಜು ಹಂತದಲ್ಲೇ ತಲುಪಿಸುತ್ತಿರುವುದು ಶ್ಲಾಘನೀಯ ಕಾರ್ಯ. ವಿದ್ಯಾರ್ಥಿಗಳು ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
  ಗದಗ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ತರಬೇತುದಾರ ಆನಂದ ಹೊಂಬಳ ಮಾತನಾಡಿ, ನಿರುದ್ಯೋಗಿ ಯುವಜನತೆಯ ಆರ್ಥಿಕ ಹಾಗೂ ವೃತ್ತಿಪರ ನೆರವಿಗಾಗಿ ಸರ್ಕಾರ ಜಾರಿಗೆ ತಂದಿರುವ ‘ಯುವನಿಧಿ’ ಯೋಜನೆಯ ಸೌಲಭ್ಯಗಳು, ಅರ್ಹತಾ ಮಾನದಂಡಗಳು ಮತ್ತು ಅದನ್ನು ಪಡೆದುಕೊಳ್ಳುವ ಪ್ರಕ್ರಿಯೆ ಕುರಿತು ವಿಸ್ತೃತ ಮಾಹಿತಿ ನೀಡಿದರು.
ಕಾಲೇಜಿನ ಉದ್ಯೋಗ ಮತ್ತು ತರಬೇತಿ ಕೋಶದ ಸಂಯೋಜಕ ಶಿವಪ್ಪ ಕುರಬರ ಮಾತನಾಡಿ, ಕಳೆದ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಕಾಲೇಜಿನಿಂದ 80ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನಗಳಲ್ಲಿ ಆಯ್ಕೆಯಾಗಿ ವಿವಿಧ ಉದ್ಯೋಗಗಳನ್ನು ಪಡೆದಿದ್ದಾರೆ. ಇವರಲ್ಲಿ ಇಬ್ಬರು ಬಿಸಿಎ ವಿದ್ಯಾರ್ಥಿಗಳು ಪುಣೆ ಮೂಲದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಉದ್ಯೋಗ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ನಾಲ್ವರು ವಿದ್ಯಾರ್ಥಿಗಳು ‘ಅಗ್ನಿವೀರ’ರಾಗಿ ಆಯ್ಕೆಯಾಗಿ ದೇಶಸೇವೆಗೆ ತೆರಳಿರುವುದು ನಮ್ಮ ಕಾಲೇಜಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಮಾಹಿತಿ ನೀಡಿದರು. 
  ಕಾರ್ಯಕ್ರಮದ ಅಂಗವಾಗಿ ಸ್ಥಳದಲ್ಲೇ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ‘ಯುವನಿಧಿ’ ಯೋಜನೆಯ ಉಚಿತ ನೋಂದಣಿ ಮಾಡಿಸಲಾಯಿತು. ಇದೇ ಸಂದರ್ಭದಲ್ಲಿ ಗದಗ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಅಧಿಕಾರಿಗಳನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಚಾಲಕಿ ಜಯಶ್ರೀ ಮುತಗಾರ,   ಪ್ರಾಧ್ಯಾಪಕರಾದ ಎಸ್. ಎಸ್. ಸೂಡಿ, ಸುನಂದಾ ಮುಂಜಿ, ಅನಿಲಕುಮಾರ, ವಿರೂಪಾಕ್ಷ ಆರ್., ಅಯ್ಯಪ್ಪ, ವಿ. ಸಿ. ಇಲ್ಲೂರ, ಕೆ. ಎನ್. ಕಟ್ಟಿಮನಿ, ವಿವೇಕಾನಂದ ಹಿರೇಮಠ, ಶರಣಪ್ಪ ಚಿಕ್ಕೆನಕೊಪ್ಪ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
Post a Comment

Post a Comment