-->
Bookmark

Naregal : ಬಾನಂಗಳದಲ್ಲಿ ಮಿನಿ ವಿಮಾನಗಳ ಹಾರಾಟ_ ರೈತರಲ್ಲಿ ಆತಂಕ

Naregal : 
ಬಾನಂಗಳದಲ್ಲಿ ಮಿನಿ ವಿಮಾನಗಳ ಹಾರಾಟ ರೈತರಲ್ಲಿ ಆತಂಕ 

ನರೇಗಲ್ : (05_09_2023)
ನರೇಗಲ್:‌ ಹೋಬಳಿಯ ನರೇಗಲ್‌ ಪಟ್ಟಣ, ಮಾರನಬಸರಿ, ಬೂದಿಹಾಳ, ನಿಡಗುಂದಿ, ಕಳಕಾಪುರ ಸಮೀಪದ ಹೊಲಗಳಲ್ಲಿ ಬುಧವಾರ ಬಾನಂಗಳದಲ್ಲಿ ಮಿನಿ ವಿಮಾನಗಳ ಹಾರಾಟವನ್ನು ಕಂಡ ಜನರು ಆಶ್ಚರ್ಯ ಚಿಕಿತರಾಗಿ ಆಕಾಶದ ಕಡೆಗೆ ನೋಡಿದರು.

ಇದೇ ಮೊದಲ ಬಾರಿಗೆ ಒಂದರ ನಂತರ ಒಂದರಂತೆ ಸಮಯದ ಅಂತರ ಕೊಟ್ಟು ಹತ್ತಾರು ಮಿನಿ ವಿಮಾನಗಳು ಭೂ ಸಮೀಪದಲ್ಲೇ ಹಾರಾಡಿದವು. ರೋಂಯ್ ಎಂದು ಸದ್ದು ಮಾಡುತ್ತ ಹಾರಾಡುತ್ತಿದ್ದ ಶಬ್ದಕ್ಕೆ ಹೊಲಗಳಲ್ಲಿ ಮೇಯುತ್ತಿದ್ದ ಕುರಿಗಳು, ದನಗಳು ಭಯದಿಂದ ಓಡಾಡಿದವು. ಕೆಲವೊಂದು ಕುರಿ, ಆಡುಗಳು ದೂರದ ವೆರೆಗ ಓಡಿ ಹೋಗಿ ನಿಂತವು. ನಾಯಿಗಳು ಆಕಾಶದ ಕಡೆಗೆ ಮುಖಮಾಡಿ ಬೋಗಳಲು ಆರಂಭಿಸಿದವು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೃಷಿ ಕಾರ್ಮಿಕರು, ರೈತರು ಹದ್ದುಗಳಂತೆ  ಹಾರಾಡುತ್ತಿರುವ ಲೋಹದ ಹಕ್ಕಿಗಳು ಆಶ್ಚರ್ಯದಿಂದ ನೋಡಲು ಆರಂಭಿಸಿದರು.  ಯುವಕರು ತಮ್ಮ ಮೊಬೈಲ್‌ ಗಳಲ್ಲಿ ವಿಡಿಯೋ ಮಾಡಲು ಮುಂದಾದರು.
ಬಹುರಾಷ್ಟ್ರೀಯ ಪವನ್‌ ವಿದ್ಯುತ್‌ ಖಾಸಗಿ ಕಂಪನಿಗಳು, ಸೋಲಾರ ಕಂಪನಿಗಳು ನರೇಗಲ್‌ ಹೋಬಳಿಯಲ್ಲಿ ಬೀಡುಬಿಟ್ಟಿವೆ. ಅದರಂತೆ ಇವು ಹೊಲಗಳಲ್ಲಿ ಸಮೀಕ್ಷೆ ಮಾಡಲು ಬಂದಿರಬೇಕು. ಕೃಷಿ ಭೂಮಿಯಲ್ಲಿ ಮಿನಿ ವಿಮಾನದ ಮೂಲಕ ಸಂಶೋಧನೆ ಮಾಡಿ ಕೈಗಾರಿಕೆ, ಗಣಿಗಾರಿಕೆ ಚಟುವಟಿಕೆಗಳನ್ನು ನಡೆಸುತ್ತಾರೆನೋ ಎನ್ನುವ ಆತಂಕ ಶುರುವಾಗಿದೆ ಎಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಾಳವ್ವ ತಳವಾರ, ಫಕೀರಪ್ಪ ಹುರಕಡ್ಲಿ, ಹಾಲಪ್ಪ ಪತ್ತಾರೆ ಹೇಳಿದರು.

ಹಿಂಗಾರು, ಮುಂಗಾರು ಹಿನ್ನಡೆಯಿಂದಾಗಿ ಮೋಡ ಬಿತ್ತನೆ ಮಾಡಲು ಬಂದಿರಬೇಕು ಎಂದು ಆನಂದ ಕುರಬರ ಹೇಳಿದರು. ಕೃಷಿ ಇಲಾಖೆಯಿಂದ ಮಿನಿ ವಿಮಾನಗಳ ಮೂಲಕ ಸಮೀಕ್ಷೆ ಕೈಗೊಂಡಿದ್ದಾರೆ ಎಂದು ಮಲ್ಲೇಶಪ್ಪ ಮೇಟಿ ಹೇಳಿದರು. ಇದೇ ರೀತಿ ಜನರು ಅವರವರ ವಿಚಾರಕ್ಕೆ ತಕ್ಕಂತೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಮಿನಿ ವಿಮಾನಗಳು ಮಾನವ ರಹಿತನಾ ಅಥವಾ ಸಹಿತ ಎನ್ನುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈ ಕುರಿತು ಪವನ ವಿದ್ಯುತ್‌ ಖಾಸಗಿ ಕಂಪನಿಯವರನ್ನು ಭೇಟಿಯಾಗಿ ಮಾತನಾಡಿಸಿದಾಗ ನಮಗೂ ವಿಮಾನಗಳ ಹಾರಾಟಕ್ಕೂ ಸಂಬಂಭವಿಲ್ಲ ಎಂದು ಪ್ರತಿಕ್ರಿಯೆ ನೀಡಿದರು. ನರೇಗಲ್‌ ಪಟ್ಟಣದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸಿ. ಕೆ. ಕಮ್ಮಾರ ವಿಮಾನಗಳ ಹಾರಾಟದ ಕುರಿತು ನಮಗೆ ಮಾಹಿತಿ ಇಲ್ಲವೆಂದರು. ಕೃಷಿ ಸಹಾಯಕ ನಿರ್ದೇಶಕ ರವೀಂದ್ರ ಪಾಟೀಲ ಮಾತನಾಡಿ ವಿಮಾನಗಳ ಹಾರಾಟ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಇದರ ಬಗ್ಗೆ ನಮಗೆ ಯಾವುದೇ ಪತ್ರ, ಮಾಹಿತಿ ಬಂದಿಲ್ಲ ಎಂದರು.

ಜನರಿಗೆ ಮಾಹಿತಿ ನೀಡದೆ ಏಕಾಏಕಿಯಾಗಿ ರೈತರ ಹೊಲಗಳ ಮೇಲೆ ಭೂಮಿಗೆ ಅತೀ ಸಮೀಪದಲ್ಲಿ ಮಿನಿ ಹೆಲಿಕಾಪ್ಟರ್ ಅಥವಾ ಮಿನಿ ವಿಮಾನಗಳ ಹಾರಾಟ ಮಾಡುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ. ಆದಷ್ಟು ಬೇಗ ಈ ಕುರಿತು ಸ್ಪಷ್ಟತೆಯನ್ನು ಸಂಬಂಧಪಟ್ಟ ಇಲಾಖೆಯವರು ನೀಡಬೇಕು ಎಂದು ಮಾರನಬಸರಿಯ ದಸ್ತಗೀರಸಾಬ್‌ ದೋಟಿಹಾಳ ಆಗ್ರಹಿಸಿದರು.
Post a Comment

Post a Comment