ಗಜೇಂದ್ರಗಡ : (Feb_03_2026)
ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್‌ಎಫ್‌ಐ ಅನೇಕ ಬಾರಿ ಹೋರಾಟ ಮಾಡಿ ಕೊಠಾರಿ ಆಯೋಗದ ವರದಿ ಆಧಾರದಲ್ಲಿ ಕೇಂದ್ರ ಸರ್ಕಾರದ ಶೇ.10% ರಷ್ಟು ಮೀಸಲಿಡಲು ಒತ್ತಾಯಿಸುತ್ತಾ ಬಂದಿದೆ. ಆದ್ರೆ, 2025-26ರ ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒಟ್ಟು ₹1.28 ಲಕ್ಷ ಕೋಟಿ (ಸುಮಾರು ₹1,28,650 ಕೋಟಿ) ರಷ್ಟು ಮಾತ್ರ ಅನುದಾನ ಮೀಸಲಿಡಲಾಗಿದೆ. ಈ ಪೈಕಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆಗಾಗಿ ₹78,572.10 ಕೋಟಿ ಮತ್ತು ಉನ್ನತ ಶಿಕ್ಷಣಕ್ಕೆ ನೀಡಲಾಗಿದೆ. ಒಟ್ಟು ಬಜೆಟ್‌ನ 6.22 % ರಷ್ಟು ಮಾತ್ರ ಮೀಸಲಿಡುವ ಮೂಲಕ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿರುವುದನ್ನು ಎಸ್‌ಎಫ್‌ಐ ಗದಗ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ರವರು ಮಂಡಿಸಿರುವ ಬಜೆಟ್ ನಲ್ಲಿ 700 ಜಿಲ್ಲೆಗಳಿದ್ದು, ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ಹಾಸ್ಟೆಲ್ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದನು ಎಸ್ಎಫ್ಐ ಸ್ವಾಗತಿಸುತ್ತದೆ. ಆದ್ರೆ, ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಕಡಿವಾಣ ಹಾಕದೆ ಇರುವುದು, ಅತ್ಯಂತ ಅಪಾಯಕಾರಿ ಬೆಳವಣಿಗೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕಾಯ್ದೆಯಲ್ಲಿ ಅನೇಕ ದೋಷಗಳಿವೆ ಎಂದು ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು ಅಭಿಪ್ರಾಯ ನೀಡಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸದಿರುವುದು ಸಹ ಸರಿಯಿಲ್ಲ.
ಜೆಇಅರ್ ಅಂಕಿ ಅಂಶಗಳ ಮಾಹಿತಿ ಪ್ರಕಾರ 37 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆರ್ಥಿಕ, ಸಾಮಾಜಿಕ ಹಿನ್ನೆಲೆಯಿಂದ ಉನ್ನತ ಶಿಕ್ಷಣ ವಂಚಿತರಿಗೆ ಶಿಕ್ಷಣಕ್ಕೆ ಕರೆ ತರುವ ಪ್ರಮುಖ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಸ್ಥಾಪನೆ ವಿಚಾರ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮೂಲಕ ಸಾರ್ವಜನಿಕ ಶಿಕ್ಷಣದ ಮಹತ್ವವನ್ನು ಕೊಲ್ಲಲು ತೀರ್ಮಾನಿಸಿದ್ದಾರೆ. ಸರಕಾರಿ ಶಾಲಾ- ಕಾಲೇಜ್- ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಈ ಬಜೆಟ್ ನಲ್ಲಿ ಗಮನ ನೀಡಿಲ್ಲ.
ದೇಶದಲ್ಲಿ ಯುವಜನರು ಎದುರಿಸುತ್ತಿರುವ ನಿರುದ್ಯೋಗ ನಿವಾರಣೆಗೆ ಸ್ಪಷ್ಟ ಮಾರ್ಗಸೂಚಿಯನ್ನು ಬಜೆಟ್ ಸೂಚಿಸದೆ ಯುವಜನರಿಗೆ ವಂಚನೆ ಮಾಡಲಾಗಿದೆ. ಇದರಿಂದಾಗಿ ಇನ್ನಷ್ಟು ನಿರುದ್ಯೋಗ ಹೆಚ್ಚಳವಾಗಲಿದೆ. ಒಟ್ಟಾರೆ ಶಿಕ್ಷಣ ಕಡೆಗಣಿಸಿ ಶಿಕ್ಷಣ ಕ್ಷೇತ್ರವನ್ನು ನಾಶಪಡಿಸುವ ಬಜೆಟ್ ಇದಾಗಿದೆ ಎಂದು ಎಸ್ ಎಫ್ ಐ ಗದಗ ಜಿಲ್ಲಾ ಅಧ್ಯಕ್ಷರಾದ ಚಂದ್ರು ರಾಠೋಡ ತಿಳಿಸಿದ್ದಾರೆ.



Post a Comment