ಸೂರ್ಯ ವಿಷನ್ ಬೆಂಗಳೂರ ಅವರ ‘ದೇವಿ’ ಸಾಮಾಜಿಕ ಕಾಳಜಿಯನ್ನೊಳಗೊಂಡ ಕನ್ನಡ ಚಲನಚಿತ್ರ ಈ ವಾರ ತೆರೆಕಾಣುತ್ತಿದೆ.
ಚಲನಚಿತ್ರ ಜಗತ್ತಿನ ಮಾಯಾಲೋಕಕ್ಕೆ ಸಿಲುಕದವರೇ ಇಲ್ಲ. ಕೆಲವು ಪಾಲಕರಂತೂ ತಮ್ಮ ಮಗಳು ಅಥವಾ ಮಗ ನಾಯಕರಾಗಿ, ನಾಯಕಿಯಾಗಿ ತೆರೆಯ ಮೇಲೆ ಮಿಂಚಬೇಕು ಎಂಬ ಕನಸು ಕಂಡೇ ಕಾಣುತ್ತಾರೆ. ಹಾಗೆಯೆ ಬಡತನದಲ್ಲಿ ಬದುಕುತ್ತಿರುವ ರೇಣುಕಾಳಿಗೆ ತನ್ನ ಮಗಳು ಗೌರಿ ಸಿನಿಮಾದ ದೊಡ್ಡ ನಾಯಕಿಯಾಗಿ ಹೆಸರು, ಹಣ ಮತ್ತು ಗೌರವ ಗಳಿಸಬೇಕು ಎಂಬ ಕನಸು. ಅವಳ ದೃಷ್ಟಿಯಲ್ಲಿ ಸಿನಿಮಾ ಬದುಕಿನ ಸಂಕಟಗಳಿಂದ ಮುಕ್ತಿ ಪಡೆಯುವ ದಾರಿ. ಆದರೆ ಮಗಳು ಗೌರಿಯ ಮನಸ್ಸು ಬೇರೆ ದಿಕ್ಕಿನಲ್ಲಿ ಸಾಗುತ್ತದೆ. ಅವಳು ಓದಿ ವೈದ್ಯೆಯಾಗಿ ಸಮಾಜ ಸೇವೆ ಮಾಡಬೇಕು ಎಂಬ ಗಂಭೀರ ಕನಸು ಹೊಂದಿದ್ದಾಳೆ. ಮಗಳು ದೊಡ್ಡ ನಟಿಯಾಗಬೇಕು ಎನ್ನುವ ತಾಯಿಯ ಅತಿಯಾದ ಆಸೆ ಆಕೆಯನ್ನು ಸ್ಲಿಮ್ ಆಗಲು ಮಾಡುವ ಪ್ರಯತ್ನಗಳು, ಅದರ ಪರಿಣಾಮವಾಗಿ ಹುಡುಗಿಯ ಮನಸ್ಥಿತಿ ಹಾಗೂ ಹಾರ್ಮೋನು ಬದಲಾವಣೆಗಳಿಂದ ಉಂಟಾಗುವ ಕೋಪ-ದ್ವೇಷಗಳು ಕೊನೆಗೆ ಹೇಗೆ ಭಯಾನಕ ತಿರುವು ಪಡೆಯುತ್ತವೆ, ಪೋಷಕರ ಮಹತ್ವಾಕಾಂಕ್ಷೆ, ಅಂಧಭಕ್ತಿ, ಬಡತನ ಮತ್ತು ಬಾಲ್ಯದ ಹಕ್ಕುಗಳ ನಡುವಿನ ಸಂಘರ್ಷವನ್ನು ತೀವ್ರವಾಗಿ ಅನ್ವೇಷಿಸುವಂತೆ ಚಿತ್ರದಲ್ಲಿ ತೋರಿಸಲಾಗಿದೆ. “ಮಕ್ಕಳ ಕನಸುಗಳನ್ನು ಹಾಳುಮಾಡಬಾರದು; ಮಾಡಬಾರದನ್ನು ಮಾಡಿದರೆ ಆಗಬಾರದೇ ಆಗುತ್ತದೆ” ಎಂಬ ಕಠಿಣ ಸತ್ಯವನ್ನು ಈ ಚಿತ್ರ ಪ್ರತಿಧ್ವನಿಸುತ್ತದೆ.
ತಾರಾಗಣದಲ್ಲಿ ಛಾಯಾರಾಣಿ, ಧನಲಕ್ಷ್ಮೀ, ರಂಗನಾಥ ನಂಜನಗೂಡು, ಮಣಿಕಂಟ ಸೂರ್ಯ, ಸುಕುಮಾರ,ಪ್ರೀತಿ ಎಸ್ ಬಾಬು, ಕಾವೇರಿ ಶ್ರೀಧರ್ ,ವೀರೇಂದ್ರ ಬೆಳ್ಳಿಚುಕ್ಕಿ, ಕಾಳಿಪ್ರಸಾದ್ ಮೊದಲಾದವರಿದ್ದಾರೆ. ತಾಂತ್ರಿಕ ವರ್ಗ ಛಾಯಾಗ್ರಹಣ ವಿನಾಯಕ ರೇವಡಿ, ಸಂಗೀತ ಶಿವಸತ್ಯ, ಸಂಭಾಷಣೆ ಕೃಷ್ಣಪ್ರಸಾದ ಹಳೇಬೀಡು, ಚಿತ್ರಕಥೆ ಪೂರ್ಣೇಶ ಸಾಗರ, ವಸ್ತ್ರವಿನ್ಯಾಸ ವೀರೇಂದ್ರ ಬೆಳ್ಳಿಚುಕ್ಕಿ, ಸಂಕಲನ ಮುತ್ತುರಾಜ ಟಿ, ಕಲರಿಷ್ಟ್ ಸಚಿನ್ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ. ಸಾಹಿತ್ಯ-ಕಥೆ-ನಿರ್ದೇಶನ ಕಾಳಿಪ್ರಸಾದ ನಿರ್ವಹಿಸಿದ್ದು, ಸಹನಿರ್ಮಾಪಕರು ಮಾರುತಿ ಎಂ, ವೀಣಾ ಎಂ ನಿರ್ಮಾಪಕರಾಗಿದ್ದಾರೆ. ‘ದೇವಿ’ ಬಾಲ್ಯದ ಸ್ವಾಯತ್ತತೆ ಮತ್ತು ಮಾನವೀಯ ಜವಾಬ್ದಾರಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಚಿಂತನೆಗೆ ಆಹ್ವಾನ ನೀಡುವ ಗಾಢ, ಮನಕಲಕುವ ಸಿನೆಮಾ ಆಗಿದ್ದು ಮಕ್ಕಳ ಜೊತೆಗೆ ಪಾಲಕರು ನೋಡಲೇ ಬೇಕಾದ ಚಲನಚಿತ್ರವಾಗಿದೆ.
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬



Post a Comment